ಚುನಿ ಗೋಸ್ವಾಮಿ 
1938- ಹೆಸರಾಂತ ಭಾರತೀಯ ಪುಟ್‍ಬಾಲ್ ಆಟಗಾರ; ಹುಟ್ಟೂರು ಕಲ್ಕತ್ತ, ನಿಜನಾಮ ಸುಬೀಮಲ್ ಗೋಸ್ವಾಮಿ. ಬಂಗಾಳದ ಪ್ರಸಿದ್ಧ ಪುಟ್‍ಬಾಲ್ ಕೋಚ್ ಬಿ.ಡಿ. ಚಟರ್ಜಿಯವರಿಂದ ನೇರವಾಗಿ ತರಬೇತಿ ಪಡೆದರು. ಚುನಿಗೋಸ್ವಾಮಿ ಉತ್ತಮ ಫಾವರ್ಡ್ ಆಟಗಾರ. 1954ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಪಂದ್ಯದಲ್ಲಿ ಭಾಗವಹಿಸಿ ಬಹುಬೇಗ ರಾಷ್ಟ್ರಿಯ ಆಟಗಾರರಾದರು. 1958 ಮತ್ತು 1962ರ ಏಷ್ಯನ್ ಕ್ರೀಡಾಕೂಟ ಮತ್ತು 1960ರ ರೋಮ್ ಒಲಿಂಪಿಕ್ ಪಂದ್ಯಗಳಲ್ಲಿ ಭಾಗವಹಿಸಿದರು. 1960ರಿಂದ ಮೋಹನ್ ಬಗಾನ್ ಮತ್ತು ಬಂಗಾಳ ರಾಜ್ಯ ತಂಡಗಳ ನಾಯಕರಾದರು. 1962ರಿಂದ ಭಾರತೀಯ ಪುಟ್‍ಬಾಲ್ ತಂಡದ ನಾಯಕರಾದರು.

	80ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ ಚುನಿಗೋಸ್ವಾಮಿ 500ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದಿದ್ದಾರೆ. 1963ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ದೊರಕಿತು. 1967ರಿಂದ 1969ರವರೆಗೆ ಆಲ್ ಇಂಡಿಯಾ ಕೌನ್ಸಿಲ್ ಆಫ್ ಸ್ಪೋಟ್ಸ್ ಸಮಿತಿಯ ಸದಸ್ಯರಾಗಿದ್ದರು. 

	ಇವರು ಉತ್ತಮ ಕ್ರಿಕೆಟ್ ಆಟಗಾರರೂ ಹೌದು. ರಣಜಿ ಮತ್ತು ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. 1972ರ ರಣಜಿ ಪಂದ್ಯಗಳಲ್ಲಿ ಇವರು ಬಂಗಾಳ ತಂಡದ ನಾಯಕರಾಗಿದ್ದರು.				(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ